ಭಾಯಿ ವೀರಸಿಂಗ್
1872-1957. ಪಂಜಾಬಿನ ಸಾಹಿತಿ. ಹುಟ್ಟಿದ್ದು ಅಮೃತಸರದಲ್ಲಿ. ತಂದೆ ಚರಣಸಿಂಗ್. ಚಿಕ್ಕಂದಿನಿಂದಲೇ ಸಿಖ್ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದ ಇವರಿಗೆ ಪರ್ಷಿಯನ್, ಉರ್ದು, ಬ್ರಜ ಭಾಷೆಗಳ ಪರಿಚಯ, ಸಂಸ್ಕøತದ ಸಾಮಾನ್ಯ ಅಭ್ಯಾಸ ಕೂಡ ಆಗಿತ್ತು. ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಚಿನ್ನದ ಪದಕದೊಂದಿಗೆ ಪಾಸು ಮಾಡಿದರೂ ಅಂದಿನ ಕಾಲಕ್ಕೆ ಪ್ರತಿಷ್ಠಿತವಾಗಿದ್ದ ಸರಕಾರೀ ಕೆಲಸಕ್ಕೆ ಗಂಟು ಬೀಳದೆ ಸಿಂಗ್ ಸಭಾದ ಕಾರ್ಯಕರ್ತರಲ್ಲಿ ಒಬ್ಬರಾಗಿ ಪೂರ್ಣಾವಧಿಯ ಸೇವಕರಾದರು. ಕ್ರೈಸ್ತ ಮಿಷನರಿ ಶಾಲೆಯಲ್ಲಿ ಶಿಕ್ಷಣ ಪಡೆದ ಸಿಂಗರಿಗೆ ಕ್ರೈಸ್ತ ಮಿಷನರಿ ಸಂಸ್ಥೆಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಪರಿಚಯವಿದ್ದು ಅವೆಲ್ಲವನ್ನೂ ಸಿಂಗ್ ಸಭಾದಲ್ಲಿ ರೂಢಿಸಲು ಪ್ರಯತ್ನಿಸಿದರು. 1892ರಲ್ಲಿ ಗೆಳೆಯರೊಂದಿಗೆ ಸೇರಿ ವರಮಿರ್-ಐ-ಹಿಂದ್ ಪ್ರೆಸ್ ಎಂಬ ಕಲ್ಲಚ್ಚಿನ ಮುದ್ರಣಾಲಯ ಸ್ಥಾಪಿಸಿದರು. ಮುಂದೆ ಅದೇ ಆಧುನಿಕ ಮುದ್ರಣಾಲಯವಾಗಿ ರೂಪುಗೊಂಡು, ಅವರ ಬಹುತೇಕ ಪುಸ್ತಕಗಳು ಅಲ್ಲಿಯೇ ಮುದ್ರಣಗೊಂಡವು. ತಂದೆ ಚರಣಸಿಂಗರು ಸ್ವತಃ ಬರಹಗಾರರಾಗಿದ್ದುದರಿಂದ ಭಾಯಿಯವರಿಗೆ ಚಿಕ್ಕಂದಿನಿಂದಲೇ ಸಾಹಿತ್ಯಕ್ಕೆ ವಾತಾವರಣ ದೊರೆತು, ವ್ಯಕ್ತಿತ್ವದ ವಿಕಾಸಕ್ಕೆ ಕಾರಣವಾಯಿತು. ಕಾದಂಬರಿ, ಕವನ, ನಾಟಕ, ಮಹಾಕಾವ್ಯ, ಜೀವನ ಚರಿತ್ರೆ, ಪತ್ರಿಕೋದ್ಯಮ, ಹಳೆಯ ಗ್ರಂಥಗಳ ಸಂಪಾದನೆ, ಅವುಗಳಿಗೆ ವ್ಯಾಖ್ಯಾನ ಈ ರೀತಿ ನಾನಾ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿ ಮಾಡಿದರು. ಆಗ ಪಂಜಾಬಿನಲ್ಲಿ ಹೊಸಗಾಳಿ ಬೀಸುತ್ತಿದ್ದ ಕಾಲ. ಇಂಥ ಸಮಯದಲ್ಲಿ ಇವರು ಹೊಸ ಬಗೆಯ ಸಾಹಿತ್ಯಸೃಷ್ಟಿಗೆ ಕಾರಣರಾದರು. ಹಳೆಯದರಿಂದ ಹೊಸದರತ್ತ ಪಂಜಾಬಿ ಸಾಹಿತ್ಯ ತನ್ನ ಪಥ ಬದಲಿಸುವಲ್ಲಿ ಹರಿಕಾರರಾದರು. ಗದ್ಯದ ಬೆಳೆವಣಿಗೆಯಲ್ಲಿ ಇವರ ಹೆಸರು ಚಿರಸ್ಥಾಯಿಯಾಯಿತು. ಪಂಜಾಬಿ ಸಾಹಿತ್ಯದ ಭಾಷೆಯ ಶೈಲಿ ಮತ್ತು ವಸ್ತುಗಳ ಮೇಲೆ ಇವರು ರೂಢಿಸಿದ ಪ್ರಕಾರಗಳು ಮಹತ್ತ್ವಪೂರ್ಣ ಪ್ರಭಾವ ಬೀರಿದ್ದುವು.

ಇವರ ಪ್ರಾರಂಭಿಕ ಕೃತಿಗಳ ಗುರುನಾನಕ ಚಮತ್ಕಾರ, ಗುರು ಕಲ್ಗಿಧರ ಚಮತ್ಕಾರ ಹಾಗೂ ಬಾಬಾ ಸೌಧಸಿಂಗ್. ಇವರು ಬರೆದ ಸುಂದರಿ (1898) ಪಂಜಾಬಿ ಭಾಷೆಯ ಮೊದಲ ಕಾದಂಬರಿ. ಸುಂದರಿ ಎಂಬ ವೀರವನಿತೆಯ ಸುತ್ತ ಹೆಣೆಯಲಾದ ಈ ಕೃತಿ ಬಹಳ ರೋಚಕವಾದದ್ದು. ನಾಟಕೀಯತೆ ಹಾಗೂ ರಹಸ್ಯವನ್ನು ಕೊನೆವರೆಗೂ ಉಳಿಸಿಕೊಂಡು, ಆಸಕ್ತಿಯನ್ನು ಕಾಯ್ದುಕೊಳ್ಳುತ್ತದೆ. 34 ಮುದ್ರಣಗಳನ್ನು ಕಂಡು, ದಶಲಕ್ಷಕ್ಕೂ ಮೇಲ್ಪಟ್ಟು ಇದರ ಪ್ರತಿಗಳು ಖರ್ಚಾಗಿವೆ. ವಿಜಯಸಿಂಗ್ ಮತ್ತು ಸತ್ಯಂತಕಾರಗ ಎಂದು ಎರಡು ಭಾಗಗಳಲ್ಲಿ ಬಂದ ಇವರ ಇನ್ನೊಂದು ಕಾದಂಬರಿ ಕೂಡ ವಸ್ತು ಮತ್ತು ಶೈಲಿಯ ದೃಷ್ಟಿಯಲ್ಲಿ ಸುಂದರಿಯನ್ನು ಅನುಸರಿಸಿಯೇ ಬಂದ ಕೃತಿ. 1921ರಲ್ಲಿ ಪ್ರಕಟವಾದ ಬಾಬಾ ಸೌಧಸಿಂಗ್ ಪಂಜಾಬಿನ ಹಳ್ಳಿಯೊಂದರ ಕೇಂದ್ರವ್ಯಕ್ತಿಯಾದ ಸೌಧಸಿಂಗನ ಸುತ್ತ ಹೆಣೆದ ಕಥೆ. ಹಳ್ಳಿಗರ ಸಂಘಟನೆ, ಹಳ್ಳಿಯ ನೈರ್ಮಲ್ಯ ಸಹಕಾರ ತತ್ತ್ವ ಮೊದಲಾದ ಹಳ್ಳಿಯ ಸಾಮಾಜಿಕ ಬದಲಾವಣೆಗಾಗಿ ಹೋರಾಡಿದ ವ್ಯಕ್ತಿ ಇದರ ನಾಯಕ. 1910ರಲ್ಲಿ ಪ್ರಕಟಗೊಂಡ ರಾಜಾ ಲಖದತ್‍ಸಿಂಗ್ ಎಂಬ ನಾಟಕ ಪಂಜಾಬೀ ಭಾಷೆಯ ಮೊದಲ ನಾಟಕ. ಇದು ಒಬ್ಬ ಚಿಕ್ಕ ರಾಜನನ್ನು ಕುರಿತ ಕೃತಿ.

ಭಾಯಿ ವೀರಸಿಂಗರ ಕಾವ್ಯ ಪ್ರಕಾರ ಕೂಡ ಗದ್ಯದಷ್ಟೇ ಪರಿಣಾಮಕಾರಿ. ರಾಣಾ ಸೂರತ್ ಸಿಂಗ್ ಇವರ ಮಹಾಕಾವ್ಯ. ಆಧ್ಯಾತ್ಮಿಕ ದೃಷ್ಟಿ, ಶ್ರೀಮಂತ ವರ್ಣನೆ, ಮೋಹಕ ಶೈಲಿ ಹಾಗೂ ಕಲಾಮೌಲ್ಯಗಳಿಂದಾಗಿ ಈ ಕೃತಿ ಇವರ ಬರೆಹಗಳಲ್ಲೇ ಅತ್ಯುತ್ತಮವಾದುದು. ಇವರ ಭಾವಗೀತೆಗಳು ಅತ್ಯಂತ ಜನಪ್ರಿಯವಾಗಿದ್ದರೆ, ಸಾಂಕೇತಿಕ ಕವನಗಳು ಪದ್ಯ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿವೆ. ಪ್ರೀತ ವೀಣಾ, ಕಾಂತ ಮಹೇಲಿ, ಬಿಜ್ಲಿಯನ್ ಡಿ ಹಾರ್, ಮೇರೆ ಸೈಯಾನ್‍ತಿಯೊ ಇವರ ಕವನ ಸಂಕಲನಗಳು.

ಇವರು 1899ರಿಂದ ಹೊರಡಿಸುತ್ತಿದ್ದ ಪತ್ರಿಕೆ ಖಾಲ್ಸಾ ಸಮಾಚಾರ ಪಂಜಾಬಿ ಪತ್ರಿಕೋದ್ಯಮಕ್ಕೊಂದು ಉತ್ತಮ ಕೊಡುಗೆ. ಸಂಪಾದಕರು ಬಹ್ವಂಶ ಲೇಖಕರೂ ಇವರೇ ಆಗಿದ್ದ ಈ ಪತ್ರಿಕೆ ಸಿಖ್ಖರ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಏಳಿಗೆಗಾಗಿ ಶ್ರಮಿಸಿತು.

ಸೃಜನಾತ್ಮಕ ಕೃತಿಗಳಲ್ಲದೆ ಗುರುಗ್ರಂಥದ ಮೇಲೆ ವ್ಯಾಖ್ಯಾನಗಳು, ಗುರು ಗ್ರ್ರಂಥದ ನಿಘಂಟು, ಭಾರತದ ಪ್ರಾಚೀನ ಸಾಹಿತ್ಯ ಮತ್ತು ತತ್ತ್ವಶಾಸ್ತ್ರಗಳನ್ನು ಕುರಿತು ಬರೆದ ಕೃತಿ-ಇವೆಲ್ಲ ಇವರ ಪಾಂಡಿತ್ಯಪೂರ್ಣ ಬರೆವಣಿಗೆಗಳು. ಇವರ ಹಸ್ತ ಪ್ರತಿಗಳ ಸಂಪಾದನೆಯ ಕಾರ್ಯವೂ ಅಷ್ಟೇ ಪ್ರಮುಖವಾದುದು. ಸಿಖ್ ಧರ್ಮ ಇತಿಹಾಸಗಳಿಗೆ ಆಕಾರ ಗ್ರಂಥವಾದ 'ಸೂರಜ ಪ್ರಕಾಶ್ ಅವುಗಳಲ್ಲಿ ಮುಖ್ಯವಾದದ್ದು.

ಇವರ ಬೌದ್ಧಿಕತೆ ಸೃಜನಶೀಲತೆಯನ್ನು ಗಮನಿಸಿ 1952ರಲ್ಲಿ ಸರ್ಕಾರ ಇವರನ್ನು ವಿಧಾನಪರಿಷತ್ತಿಗೆ ನೇಮಕ ಮಾಡಿತು. 1949ರಲ್ಲೇ ಉತ್ತರ ಪಂಜಾಬಿ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ನೀಡಿತು. 1957ರಲ್ಲಿ ಮೇರೆ ಸೈಯಾನ್ ತಿಯೊ ಎಂಬ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಸಿಕ್ಕಿತು. ಪಂಜಾಬಿ ಸಾಹಿತ್ಯಕ್ಕೆ ಇದೇ ಮೊದಲ ಬಹುಮಾನ. 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಯಿತು. ಭಾಯಿ ವೀರಸಿಂಗ್ 1957ರ ಜೂನಿನಲ್ಲಿ ವಿಧಿವಶರಾದರು. 
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ